ಮಹಿಮಭಟ್ಟ : -
1020-1100. ವ್ಯಕ್ತಿ ವಿವೇಕ ಎಂಬ ಲಕ್ಷಣಗ್ರಂಥದ ಕರ್ತೃ. ವ್ಯಕ್ತಿ ವಿವೇಕಕಾರ ಎಂದೇ ಈತ ಪ್ರಸಿದ್ಧ. ಈತ ಕಾಶ್ಮೀರದೇಶದವ. ತನ್ನ ಕೃತಿಯ ಕೊನೆಯಲ್ಲಿ ತಾನು ಶ್ರೀಧೈರ್ಯನ ಮಗನೆಂದೂ ಶ್ಯಾಮಲನ ಶಿಷ್ಯನೆಂದೂ ಹೇಳಿಕೊಂಡಿದ್ದಾನೆ. ಧ್ವನಿಸಿದ್ಧಾಂತದ ದೋಷಗಳನ್ನು ಪ್ರದರ್ಶಿಸುವುದಕ್ಕಾಗಿಯೇ ಈತ ಕೃತಿಯನ್ನು ರಚಿಸಿರುವುದರಿಂದ 'ಧ್ವನಿಕಾರ ಆನಂದ ವರ್ಧನನ ಅನಂತರದವನೆಂಬುದು ಸ್ಪಷ್ಟ. 'ಧ್ವನ್ಯಾಲೋಕ ಲೋಚನ ದಿಂದ ಒಂದು ಭಾಗವನ್ನು ತನ್ನ ಗ್ರಂಥದಲ್ಲಿ ಉದ್ಧರಿಸಿ ಖಂಡಿಸಿರುವುದರಿಂದ ಈತ ಅಭಿನವಗುಪ್ತನಿಗಿಂತಲೂ ಈಚಿನವ. ಹೀಗಾಗಿ ಈತನ ಕಾಲವನ್ನು ಕ್ರಿ. ಶ ಹನ್ನೊಂದನೆಯ ಶತಮಾನದ ಪೂರ್ವಾರ್ಧವೆಂದು ಹೇಳಬಹುದು.

 ವ್ಯಕ್ತಿ ಎಂದರೆ ವ್ಯಂಜನಾವ್ಯಾಪಾರ ಅದರ ವಿವೇಚನೆಯ ಉದ್ದೇಶದಿಂದಲೇ ವ್ಯಕ್ತಿ ವಿವೇಕ ರಚಿತವಾಗಿದೆ. ಮಹಿಮಭಟ್ಟ ಈ ಕೃತಿಯಲ್ಲಿ ಪ್ರತಿಪಾದಿಸಿರುವ ಸಂಪ್ರಾಯಕ್ಕೆ ಅನುಮಾನ ಸಂಪ್ರದಾಯವೆಂದು ಹೆಸರು. ಎಲ್ಲ ಬಗೆಯ ಧ್ವನಿಯು ಅನುಮಾನದಲ್ಲಿ ಅಂತರ್ಭಾವವಾಗಿರುವುದನ್ನು ಪ್ರಕಾಶಗೊಳಿಸಲು ವ್ಯಕ್ತಿ ವಿವೇಕವನ್ನು ತಾನು ರಚಿಸುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾನೆ. ಇದಕ್ಕೆ ರುಯ್ಯಕನು ವ್ಯಕ್ತಿವಿವೇಕವಿಚಾರ ಎಂಬ ಅಪೂರ್ಣ ವ್ಯಾಖ್ಯಾನ ರಚಿಸಿದ್ದಾನೆ. ಚಾಮುಂಡಸಿಂಹನ ತಿಲಕರತ್ನ ಎಂಬ ವ್ಯಾಖ್ಯೆಯೂ ಈ ಕೃತಿಗಿದೆ.	

ವ್ಯಕ್ತಿ ವಿವೇಕದಲ್ಲಿ ಧ್ವನಿಲಕ್ಷಣಾಕ್ಷೇಪ, ಶಬ್ದಾನೌಚಿತ್ಯ ವಿಚಾರ, ಅಂತರ್ಭಾವೋಪ ದರ್ಶನ ಎಂಬ ಮೂರು ವಿಮರ್ಶೆಗಳಿವೆ. ಮೊದಲನೆಯದರಲ್ಲಿ ಆನಂದವರ್ಧನ ಧ್ವನಿಲಕ್ಷಣವನ್ನು ಉದ್ಧರಿಸಿ ಅದರಲ್ಲಿ ಹತ್ತು ದೋಷಗಳನ್ನು ತೋರಿಸಿದ್ದಾನೆ. ಎರಡನೆಯದರಲ್ಲಿ ಶಬ್ದ ಅರ್ಥಗಳಿಗೆ ಸಂಬಂಧಿಸಿದಂತೆ ಔಚಿತ್ಯದ ಪ್ರಶ್ನೆಯನ್ನು ಪರಿಶೀಲಿಸಿದ್ದಾನೆ. ರಸನಿಷ್ಟತ್ತಿಯಲ್ಲಿ ವಿಭಾವ, ಅನುಭಾವ, ವ್ಯಭಿಚಾರಿಭಾವಗಳ ಅನುಚಿತ ಉಪಯೋಗ ಎಂಬ ಅಂತರಂಗ ಅನೌಚಿತ್ಯ ಹಾಗೂ ವಿಧೇಯಾವಿಮರ್ಶೆ. ಪ್ರಕ್ರಮಭೇದ, ಕ್ರಮಭೇದ, ಪೌನಾರುಕ್ತ್ಯ. ವಾಚ್ಯವಾಚನ ಎಂಬ ಐದು ಬಗೆಯ ಬಹಿರಂಗ ಅನೌಚಿತ್ಯಗಳ ವಿಸ್ತಾರ ವಿಮರ್ಶೆ ಇಲ್ಲಿದೆ. ಮೂರನೆಯ ವಿಮರ್ಶೆಯಲ್ಲಿ ಧ್ವನಲೋಕದಿಂದ ಸುಮಾರು ನಲವತ್ತು ಉದಾಹರಣೆಗಳನ್ನು ಉದ್ಧರಿಸಿ ಅವೆಲ್ಲವೂ ವ್ಯಂಜನಕ್ಕೆ ಬದಲಾಗಿ ಅನುಮಾನಕ್ಕೇ ಉದಾಹರಣೆಗಳೆಂದು ನಿರೂಪಿಸಿದ್ದಾನೆ.
 
ಮಹಿಮಭಟ್ಟ ಕುಂತಕನ ವಕ್ರೋಕ್ತಿ ಸಿದ್ದಾಂತವನ್ನು ಒಪ್ಪದೆ ಧ್ವನಿಯಂತೆ ಅದೂ ಅನುಮಾನದಲ್ಲಿಯೇ ಸೇರುವುದೆಂದು ತಿಳಿಸುತ್ತಾನೆ. ಆದರೆ ಧ್ವನಿತತ್ತ್ವವನ್ನು ಖಂಡಿಸುವ ಮುಖ್ಯೋದ್ದೇಶವೇ ಮಹಿಮಭಟ್ಟನ ಗುರಿಯಾದ್ದರಿಂದ 'ಸಾಹಿತ್ಯ ದರ್ಪಣ'ದ ಕರ್ತೃ ವಿಶ್ವನಾಥನೂ ಇನ್ನಿತರ ವ್ಯಾಖ್ಯಾನಕಾರನಾದ ರುಯ್ಯಕನೇ ನಿರ್ದಾಕ್ಷಿಣ್ಯವಾಗಿ ಈತನ ವಾದವನ್ನು ಖಂಡಿಸಿದ್ದಾನೆ.

ತತ್ತ್ವೋಕ್ತಿಕೋಶ ವೆಂಬ ಲಕ್ಷಣಗ್ರಂಥವನ್ನು ಮಹಿಮಭಟ್ಟ ರಚಿಸಿರುವನೆಂದೂ ಆ ಗ್ರಂಥದಲ್ಲಿ ಪ್ರತಿಭಾತತ್ತ್ವವನ್ನು ಸವಿಸ್ತಾರವಾಗಿ ನಿರೂಪಿಸಿರುವನೆಂದೂ ತಿಳಿದುಬರುತ್ತದೆ. ಆದರೆ ಆ ಕೃತಿ ಉಪಲಬ್ಧವಿಲ್ಲ.
(ಟಿ. ಎಸ್. ವಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ